ವಿಜಯಪುರ : ವಿದ್ಯಾರ್ಥಿಗಳು ಕುತೂಹಲ, ಸ್ನೇಹಿತರ ಒತ್ತಡ, ಖಿನ್ನತೆ ಹಾಗೂ ಒತ್ತಡದ ಕಾರಣಕ್ಕೆ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದು ಪೊಲೀಸ್ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ ಸಲಹೆ ನೀಡಿದರು.
ನಗರದ ಸಿಕ್ಯಾಬ್ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಪೋಲಿಸ್ ಹಾಗೂ
ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಆಯೋಜಿಸಲಾಗಿದ್ದ ಡ್ರಗ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ
ಅವರು ಮಾದಕ ವಸ್ತುಗಳ ಮಾರಾಟ ಮಾತ್ರವಲ್ಲ, ಸೇವನೆಯೂ ಕಾನೂನುಬದ್ಧ ಅಪರಾಧವಾಗಿದ್ದು, ಆಧುನಿಕ ಫೊರೆನ್ಸಿಕ್
ತಂತ್ರಜ್ಞಾನದ ಮೂಲಕ ಹಲವು ತಿಂಗಳುಗಳ ಬಳಿಕವೂ ಡ್ರಗ್ಸ್ ಸೇವನೆಯನ್ನು ಪತ್ತೆಹಚ್ಚಲು ಸಾಧ್ಯವಿದೆ ಎಂದು
ತಿಳಿಸಿದರು.
ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದರೆ ಉನ್ನತ ಶಿಕ್ಷಣ, ವಿದೇಶಿ ವೀಸಾ ಹಾಗೂ ರ‍್ಕಾರಿ
ಉದ್ಯೋಗ ಸೇರಿದಂತೆ ಭವಿಷ್ಯದ ಅವಕಾಶಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು,
ಕೆಲವೇ ಕ್ಷಣಗಳ ಉಲ್ಲಾಸಕ್ಕಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು
ಹೇಳಿದರು.
ಡ್ರಗ್ ಫ್ರೀ ರಾಜ್ಯ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳು,
ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಡ್ರಗ್ಸ್ ಸಂಬಂಧಿತ ಮಾಹಿತಿ ಇದ್ದರೆ ಕೆಎಸ್ ಪಿ ಆ್ಯಪ್
ಮೂಲಕ ಗೌಪ್ಯವಾಗಿ ಹಂಚಿಕೊಳ್ಳುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳು ತಮ್ಮ ಶಕ್ತಿ
ಮತ್ತು ಪ್ರತಿಭೆಯನ್ನು ಶಿಕ್ಷಣ, ಕ್ರೀಡೆ ಹಾಗೂ ಸೃಜನಾತ್ಮಕ ಚಟುವಟಿಕೆಗಳತ್ತ ಹೆಚ್ಚಿನ ಗಮನ ಹರಿಸಿ, ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಜೀವನ
ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಮಾತನಾಡಿ ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಕೇವಲ ಮಾದಕ ವಸ್ತುಗಳ
ಪೂರೈಕೆ ತಡೆಯುವುದಷ್ಟೇ ಸಾಕಾಗುವುದಿಲ್ಲ ಅದರ ಬೇಡಿಕೆಯನ್ನೂ ಕಡಿಮೆ ಮಾಡುವುದು ಅತ್ಯಗತ್ಯವಾಗಿದೆ. ಯುವಜನರಲ್ಲಿ ಮಾದಕ
ವಸ್ತುಗಳ ಬೇಡಿಕೆ ಹೆಚ್ಚಿದಂತೆ ಅದರ ಪೂರೈಕೆಯೂ ಹೆಚ್ಚಾಗುತ್ತದೆ. ಆದ್ದರಿಂದ ಡ್ರಗ್ಸ್ ಮುಕ್ತ ಸಮಾಜ
ನಿರ್ಮಾಣಕ್ಕೆ ಪೂರೈಕೆ ಮತ್ತು ಬೇಡಿಕೆ ಎರಡನ್ನೂ ನಿಯಂತ್ರಿಸುವ ಸಮಗ್ರ ಹೋರಾಟ ಅಗತ್ಯ ಎಂದು ಹೇಳಿದರು.
ಇನ್ನೂ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಲಾವುದ್ದಿನ್ ಪುಣೇಕರ್ ಮಾತನಾಡಿ,
ಡ್ರಗ್ಸ್ ಸಮಸ್ಯೆ ಶಿಕ್ಷಣ ಸಂಸ್ಥೆಗಳಿಗೂ ವ್ಯಾಪಿಸಿದ್ದು,
ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ
ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ನಿಯಮಿತವಾಗಿ ತರಗತಿಗಳಿಗೆ ಹಾಜರಾಗಬೇಕು, ಅನಗತ್ಯವಾಗಿ ರಾತ್ರಿ
ಹೊತ್ತು ಅಲೆದಾಡುವುದನ್ನು ತಪ್ಪಿಸಬೇಕು ಹಾಗೂ ತಮ್ಮ ಸಮಯವನ್ನು ಶಿಕ್ಷಣ, ಕ್ರೀಡೆ ಮತ್ತು ಸೃಜನಾತ್ಮಕ
ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ
ಡಾ.ಎಚ್.ಕೆ.ಯಡಹಳ್ಳಿ ಸಿಪಿಐಗಳಾದ ಆರೀಫ್ ಮುಶಾಫುರ, ಪ್ರದೀಪ್ ತಳಕೆರಿ, ಮಹೇಶ್ ಸಂಖ, ಡಿಎಸ್ಪಿ ಸುನಿಲ್ ಕಾಂಬ್ಳೆ, ಹಾಗೂ ಮಹಿಳಾ ಪಿಎಸ್ಐಗಳು ವಿದ್ಯರ‍್ಥಿಗಳು ಜಿಲ್ಲಾ ಪೊಲೀಸ್ ಇಲಾಖೆ ಸಿಕ್ಯಾಬ್ ಇಂಜಿನಿಯರಿಂಗ್
ಕಾಲೇಜಿನ ಪ್ರಾಂಶುಪಾಲರಾದ ಡಾ. ಸೈಯದ್ ಅಬ್ಬಾಸ್ ಅಲಿ, ಎ ಆರ್ ಎಸ್ ಐ ಕಾಲೇಜಿನ ಪ್ರಾಂಶುಪಾಲರಾದ ಡಾ.
ಎಚ್ ಕೆ ಯಡಹಳ್ಳಿ ಇಂಜಿನಿಯರಿಂಗ್ ಕಾಲೇಜು ವಿವಿಧ
ವಿಭಾಗಗಳ ಮುಖ್ಯಸ್ಥರು ಸಿಬ್ಬಂದಿಗಳು ಉಪಸ್ಥಿತರಿದ್ದರು


ಕಾಮೆಂಟ್ ಪೋಸ್ಟ್ ಮಾಡಿ